ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸುವುದು: ಒಂದು ಕೈ ಕೆಸರಾಗುವ ಕೆಸಲ, ಆದರೂ ಇದನ್ನು ಯಾರಾದರೂ ಮಾಡಲೇಬೇಕಲ್ಲವೇ!


ಚಿತ್ರ 1: ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ 13 ಸಂಭಾವ್ಯ ಭೀತಿಗಳಿಗೆ ಸಂಬಂಧಿಸಿದ ಅಪಾಯದ ಮಟ್ಟ. ವಿಜ್ಞಾನಿಗಳ ಶ್ರೇಯಾಂಕಗಳ ಆಧಾರದ ಮೇಲೆ ಸಂಖ್ಯೆಗಳು ಪ್ರತಿ ಭೀತಿಯ ಸ್ಥಾನವನ್ನು ಸೂಚಿಸುತ್ತವೆ, ಕನಿಷ್ಠ ಅಪಾಯಕಾರಿ (ಸಣ್ಣ ಸಂಖ್ಯೆಗಳು) ನಿಂದ ಅತ್ಯಂತ ಅಪಾಯಕಾರಿ (ಹೆಚ್ಚಿನ ಸಂಖ್ಯೆಗಳು). ಪಾರದರ್ಶಕ ಬಾರ್ ಗಳು ತಜ್ಞರು ಒಪ್ಪಲಾಗದ ಭೀತಿಗಳನ್ನು ಸೂಚಿಸುತ್ತವೆ, ಆದ್ದರಿಂದ ಅವು ವಿವಾದಾತ್ಮಕವಾಗಿ ಉಳಿದಿವೆ ಮತ್ತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಸೂಕ್ಷ್ಮಜೀವಿಗಳು ಮತ್ತು ಮಣ್ಣಿನ ಪ್ರಾಣಿಗಳಿಗೆ, ಮಣ್ಣಿನ ಜೀವವೈವಿಧ್ಯತೆಗೆ ಅತಿದೊಡ್ಡ ಅಪಾಯವೆಂದರೆ ತೀವ್ರವಾದ ಮಾನವ ಬಳಕೆ ಎಂದು ನೀವು ನೋಡಬಹುದು.

ಚಿತ್ರ 2: 2016 ರಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಯುರೋಪಿಯನ್ ಒಕ್ಕೂಟದ 27 ದೇಶಗಳಲ್ಲಿ ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ ಅಪಾಯದ ನಕ್ಷೆಗಳು. ಅಧ್ಯಯನ ಮಾಡಿದ ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ, 40% ಮಣ್ಣು ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಮಣ್ಣಿನ ಪ್ರಾಣಿಗಳಿಗೆ ಹೆಚ್ಚಿನ ಮಟ್ಟದ ಅಪಾಯವನ್ನುಂಟುಮಾಡುತ್ತದೆ.
Open PDF in new window.
Alberto Orgiazzi1
1 European Commission, Centro de Investigación Conjunta (CIC), Italia
ಮಣ್ಣಿನ ಜೀವವೈವಿಧ್ಯತೆ ಎಂದರೆ ಸೂಕ್ಷ್ಮಜೀವಿಗಳಿಂದ ಹಿಡಿದು ಪ್ರಾಣಿಗಳವರೆಗೆ ಮಣ್ಣಿನಲ್ಲಿ ವಾಸಿಸುವ ವಿವಿಧ ಆಕಾರ ಮತ್ತು ಗಾತ್ರಗಳ ಜೀವಿಗಳ ಶ್ರೇಣಿ. ಮಣ್ಣಿನ ಜೀವವೈವಿಧ್ಯತೆಯು ಅತ್ಯಂತ ಮುಖ್ಯವಾದ ವಿಷಯವಾಗಿದೆ ಹಾಗೂ ಅದನ್ನು ರಕ್ಷಿಸಲು, ಅಳಿವಿನಂಚಿನಲ್ಲಿರುವ ಮಣ್ಣಿನ ಜೀವಿಗಳು ಎಲ್ಲಿ ಮತ್ತು ಹೇಗೆ ವಾಸಿಸುತ್ತವೆ ಎಂಬುದನ್ನು ತಿಳಿದಿಕೊಳ್ಳುವುದು ತುಂಬಾ ಅವಶ್ಯಕ. ದುರದೃಷ್ಟವಶಾತ್, ಹೆಚ್ಚಿನ ಮಣ್ಣಿನ ಪ್ರಭೇದಗಳ ವಿಭಾಗಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ಆದಾಗ್ಯೂ, ಮಣ್ಣು ಮತ್ತು ಮಣ್ಣಿನ ನಿವಾಸಿಗಳಿಗೆ ಇರುವ ಸಂಭಾವ್ಯ ಭೀತಿಗಳ ಬಗ್ಗೆ ನಮಗೆ ತಿಳಿದಿದೆ. ಆದ್ದರಿಂದ, ನಾವು ಅಪಾಯಗಳು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸುತ್ತೇವೆ ಮತ್ತು ಆ ಅಪಾಯಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ, ಇದು ಪರೋಕ್ಷವಾಗಿ ಮಣ್ಣಿನ ಜೀವಿಗಳನ್ನು ರಕ್ಷಿಸಲು ನಮಗೆ ಅನುವು ಮಾಡಿಕೊಡುತ್ತದೆ. ಈ ಮಾರ್ಗವನ್ನು ಅನುಸರಿಸಿ, ನಾವು (ಬ್ರೆಕ್ಸಿಟ್ ಪೂರ್ವ) ಯುರೋಪಿಯನ್ ಒಕ್ಕೂಟದ 27 ದೇಶಗಳಲ್ಲಿ ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ ಅಪಾಯವನ್ನು ಮ್ಯಾಪ್ ಮಾಡಿದ್ದೇವೆ. ಈ ಪ್ರಯತ್ನದಿಂದ ನಾವು ಕಂಡುಕೊಂಡ ವಿಷಯವೆಂದರೆ, 40% ಕ್ಕಿಂತ ಹೆಚ್ಚು ಮಣ್ಣಿನಲ್ಲಿ ವಾಸಿಸುವ ಜೀವಿಗಳು ಹಲವು ದೇಶಗಳಲ್ಲಿ ಅಪಾಯದಂಚಿನಲ್ಲಿವೆ, ಹಾಗಾಗಿ ಈ ಫಲಿತಾಂಶಗಳು ತಕ್ಷಣದ ಕ್ರಮಕೈಗೊಳ್ಳುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.
ಮಣ್ಣಿನ ಜೀವವೈವಿಧ್ಯತೆಯ ಪ್ರಾಮುಖ್ಯತೆ
ನಮ್ಮ ಗ್ರಹದ ಮೇಲಿನ ಜೀವಗಳಲ್ಲಿ ಸರಿಸುಮಾರು ಅರ್ಧದಷ್ಟು ಜೀವಿಗಳು ನಮ್ಮ ಕಾಲಕೆಳಗೆ, ಅಂದರೆ ಮಣ್ಣಿನಲ್ಲಿ ವಾಸಿಸುತ್ತದೆ ಎಂದು ಅಂದಾಜಿಸಲಾಗಿದೆ. ಮಣ್ಣಿನಲ್ಲಿ ವಾಸಿಸುವ ವಿಶಾಲ ಶ್ರೇಣಿಯ ಜೀವಿಗಳು ಮಾನವರಿಗೆ ಅನೇಕ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತವೆ. ಸಸ್ಯಗಳು ಬೆಳೆಯಲು ಸಹಾಯ ಮಾಡುವ ಮೂಲಕ ಅವು ಆಹಾರ ಉತ್ಪಾದನೆಯನ್ನು ಬೆಂಬಲಿಸುತ್ತವೆ, ಮತ್ತು ಅವು ಪೋಷಕಾಂಶ ಸೈಕ್ಲಿಂಗ್ (ವಿಶೇಷವಾಗಿ ಇಂಗಾಲ ಮತ್ತು ಸಾರಜನಕ) ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಇದರಿಂದಾಗಿ ಭೂಮಿಯ ಹವಾಮಾನವನ್ನು ನಿಯಂತ್ರಿಸುತ್ತವೆ. ಇತರ ಕಡಿಮೆ ಸ್ಪಷ್ಟವಾದ ಆದರೆ ಇನ್ನೂ ನಿರ್ಣಾಯಕ ಸೇವೆಗಳಾದ ನೀರಿನ ಶುದ್ಧೀಕರಣ ಮತ್ತು ಪ್ರಮುಖ ವೈದ್ಯಕೀಯ ಬಳಕೆಗಳನ್ನು ಹೊಂದಿರುವ ವಸ್ತುಗಳ ಉತ್ಪಾದನೆಯನ್ನು ಒಳಗೊಂಡಿದೆ. ಉದಾಹರಣೆಗೆ, ನಾವು ಪ್ರಸ್ತುತ ಬಳಸುವ ಹೆಚ್ಚಿನ ‘ಆಂಟಿಬಯೋಟಿಕ್’ಗಳು ಮಣ್ಣಿನ ಜೀವಿಗಳಿಂದ ಬರುತ್ತವೆ. ಅದರ ಪ್ರಾಮುಖ್ಯತೆಯ ಹೊರತಾಗಿಯೂ, ಭೂಮಿಯ ಜೀವವೈವಿಧ್ಯತೆಯನ್ನು ಹೇಗೆ ರಕ್ಷಿಸುವುದು ಎಂಬುದರ ಬಗ್ಗೆ ಜನರು ಯೋಚಿಸುವಾಗ ಮಣ್ಣಿನ ಜೀವವೈವಿಧ್ಯತೆಯನ್ನು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ. ಜೀವವೈವಿಧ್ಯ ಸಂರಕ್ಷಣೆಗಾಗಿ ಪ್ರಸ್ತುತ ಹೆಚ್ಚಿನ ಯೋಜನೆಗಳು ನೆಲದ ಮೇಲೆ ವಾಸಿಸುವ ಜೀವಿಗಳನ್ನು ಮಾತ್ರ ಗುರಿಯಾಗಿಸುತ್ತವೆ. ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸುವುದು ಅಷ್ಟು ಸುಲಭವಲ್ಲ - ಇದು ಕೈಕೆಸರಾಗುವಂತಹ ಕೆಲಸ, ಆದರೂ ಇದನ್ನು ಮಾಡಲೇಬೇಕಾದದು ಅವಶ್ಯವಾಗಿದೆ!
ಮಣ್ಣಿನ ಜೀವವೈವಿಧ್ಯತೆಯನ್ನು ಸಂರಕ್ಷಿಸಿವುದು ಹೇಗೆ?
ನೀವು ಹೊಸ, ಸವಾಲಿನ ಮಿಷನ್ ಹೊಂದಿರುವ ಸೂಪರ್ ಹೀರೋ ಎಂದು ಕಲ್ಪಿಸಿಕೊಳ್ಳಿ: ಕೆಲವೇ ದಿನಗಳಲ್ಲಿ ಕಣ್ಮರೆಯಾಗುವ ಸಸ್ತನಿಗಳು, ಸಸ್ಯಗಳು, ಸರೀಸೃಪಗಳು ಮತ್ತು ಕೀಟಗಳ ಗುಂಪನ್ನು ನೀವು ಉಳಿಸಬೇಕು. ನೀವು ರಕ್ಷಿಸಲು ಬಯಸುವ ಜೀವಿಗಳ ಗುಂಪು ನೆಲದ ಮೇಲೆ ವಾಸಿಸುತ್ತಿದ್ದರೆ,, ನಿಮ್ಮ ಅಳಿವಿನಂಚಿನಲ್ಲಿರುವ ಸಮುದಾಯವು ಎಲ್ಲಿ ವಾಸಿಸುತ್ತದೆ ಎಂಬುದನ್ನು ನೀವು ಸುಲಭವಾಗಿ ಗುರುತಿಸಬಹುದು. ಇದು ನಿಮಗೆ ಸಂರಕ್ಷಿತ ಪ್ರದೇಶವನ್ನು ರಚಿಸಲು ಅನುವು ಮಾಡಿಕೊಡುತ್ತದೆ- ಬಹುಶಃ ನಿಮ್ಮ ಅಳಿವಿನಂಚಿನಲ್ಲಿರುವ ಗುಂಪು ವಾಸಿಸುವ ಸ್ಥಳವನ್ನು ಒಂದು ರೀತಿಯ ಬೇಲಿ ಸುತ್ತುವರೆದಿದೆ. ಮಿಷನ್ ಪೂರ್ಣಗೊಂಡಿದೆ: ನೀವು ಜೀವವೈವಿಧ್ಯತೆಯನ್ನು ರಕ್ಷಿಸುತ್ತಿದ್ದೀರಿ. ಆದಾಗ್ಯೂ, ಭಹಳಷ್ಟು ಸಂದರ್ಭಗಳಲ್ಲಿ ಕೆಲಸವು ಅಷ್ಟು ಸುಲಭವಾಗಿರುವುದಿಲ್ಲ. ನೆಲದ ಕೆಳಗೆ ವಾಸಿಸುವ ಜೀವಿಗಳನ್ನು ನೀವು ರಕ್ಷಿಸಬೇಕಾದರೆ, ಅವುಗಳು ಯಾವು ಮತ್ತು ಎಲ್ಲಿವಾಸಿಸುತ್ತವೆ ಎಂಬುದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇಲ್ಲದಿರಬಹುದು. ಏಕೆಂದರೆ ನಮ್ಮ ಪಾದಗಳ ಕೆಳಗೆ ವಾಸಿಸುವ ಹೆಚ್ಚಿನ ಪ್ರಭೇದಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ [1]. ಇದಲ್ಲದೆ, ಮಣ್ಣಿನ ಜೀವವೈವಿಧ್ಯತೆಯು ಅತ್ಯಂತ ಸಂಕೀರ್ಣವಾದುದು ಮತ್ತು ಬರಿಗಣ್ಣಿಗೆ ಅಗೋಚರವಾಗಿರುವ ಮಣ್ಣಿನ ಸೂಕ್ಷ್ಮಜೀವಿಗಳಿಂದ ಹಿಡಿದು ಎರೆಹುಳುಗಳು ಮತ್ತು ಮೋಲ್ ಗಳಂತಹ ಪ್ರಾಣಿಗಳು ಸೇರಿದಂತೆ ಮಣ್ಣಿನ ಪ್ರಾಣಿಗಳವರೆಗೆ ವ್ಯಾಪಿಸಿದೆ. ಆದ್ದರಿಂದ, ಮಣ್ಣಿನ ಜೀವಿಗಳು ಎಲ್ಲಿ ವಾಸಿಸುತ್ತವೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅತ್ಯಂತ ಕಷ್ಟಕರವಾದ, ಕೆಲವೊಮ್ಮೆ ಅಸಾಧ್ಯವಾದ ಕೆಲಸವಾಗಿದೆ. ಅದೃಷ್ಟವಶಾತ್, ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತೊಂದು, ಪರೋಕ್ಷ ಮಾರ್ಗವಿದೆ. ಜೀವಿಗಳ ಗುಂಪು ಎಲ್ಲಿ ವಾಸಿಸುತ್ತದೆ ಎಂದು ನಿಮಗೆ ತಿಳಿದಿಲ್ಲದಿದ್ದರೂ, ಮಣ್ಣಿನ ಜೀವಿಗಳು ಸಂಭಾವ್ಯ ಭೀತಿಗಳಿಂದ ಅಪಾಯದಲ್ಲಿರುವ ಪ್ರದೇಶಗಳನ್ನು ನೀವು ಕಂಡುಹಿಡಿಯಬಹುದು. ಒಮ್ಮೆ ನೀವು ಆ ಹೆಚ್ಚಿನ ಅಪಾಯದ ಪ್ರದೇಶಗಳನ್ನು ಮ್ಯಾಪ್ ಮಾಡಿದ ನಂತರ, ನಿಮ್ಮ ಉದ್ದೇಶಿಸಿದ ಜೀವಿಗಳ ಮೇಲೆ ಪರಿಣಾಮ ಬೀರುವ ಅಪಾಯಗಳನ್ನು ಕಡಿಮೆ ಮಾಡಲು ನೀವು ಕೆಲಸ ಮಾಡಬಹುದು. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ...
ಮಣ್ಣಿನ ಜೀವವೈವಿಧ್ಯತೆಗೆ ಅಪಾಯಗಳನ್ನು ಗುರುತಿಸುವುದು
ಸಹಜವಾಗಿ, ಪ್ರತಿಯೊಂದು ಮಿಷನ್ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಣ್ಣಿನ ಜೀವವೈವಿಧ್ಯತೆಯ ಪರೋಕ್ಷ ರಕ್ಷಣೆಯು ಮೂರು ಪ್ರಮುಖ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ. ಮೊದಲಿಗೆ, ಮಣ್ಣಿನ ಜೀವವೈವಿಧ್ಯತೆಗೆ ಪ್ರಮುಖ ಅಪಾಯಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಅನೇಕ ವಿಷಯಗಳು ಮಣ್ಣಿನ ಜೀವಿಗಳ ಮೇಲೆ ಪರಿಣಾಮ ಬೀರಬಹುದು, ಆದರೆ ಅಳೆಯಬಹುದಾದ ಮತ್ತು ವಾಸ್ತವವಾಗಿ ಮಣ್ಣಿನಲ್ಲಿರುವ ಜೀವಿಗಳಿಗೆ ಅಪಾಯಕಾರಿ ಎಂದು ತಿಳಿದಿರುವ ಪ್ರಸ್ತುತ ಭೀತಿಗಳನ್ನು ನಾವು ಗುರುತಿಸಬೇಕಾಗಿದೆ. ಮಣ್ಣಿನ ಜೀವಿಗಳನ್ನು ಅಪಾಯಕ್ಕೆ ತಳ್ಳುವ ಅಂಶವನ್ನು ಕಂಡುಹಿಡಿಯಲು ವಿಜ್ಞಾನಿಗಳು ಹಲವು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಆದ್ದರಿಂದ, ಸೂಪರ್ ಹೀರೋ ಆಗಿ, ಈ ವಿಷಯದ ಬಗ್ಗೆ ಲಭ್ಯವಿರುವ ಎಲ್ಲಾ ಸಾಹಿತ್ಯವನ್ನು ಓದುವುದು ನಿಮ್ಮ ಮೊದಲ ಹೆಜ್ಜೆಯಾಗಿರಬೇಕು. ನಾವು ಸೂಪರ್ ಹೀರೋಗಳಲ್ಲದಿದ್ದರೂ, ಯುರೋಪಿಯನ್ ಒಕ್ಕೂಟದಲ್ಲಿ ಅಪಾಯದಲ್ಲಿರುವ ಮಣ್ಣನ್ನು ಮ್ಯಾಪಿಂಗ್ ಮಾಡುವ ನಮ್ಮ ಅಧ್ಯಯನದಲ್ಲಿ ನಾವು ಅದನ್ನೇ ಮಾಡಿದ್ದೇವೆ. ಮಾಲಿನ್ಯ ಮತ್ತು ಆನುವಂಶಿಕವಾಗಿ ಮಾರ್ಪಡಿಸಿದ ಜೀವಿಗಳ (GMO) ಬಳಕೆಯಿಂದ ಹಿಡಿದು ಶುಷ್ಕತೆ ಮತ್ತು ತೀವ್ರ ಹವಾಮಾನ ಘಟನೆಗಳಿಂದಾಗಿ ಮಣ್ಣಿನ ನಷ್ಟದವರೆಗೆ ಮಣ್ಣಿನ ಜೀವಿಗಳಿಗಿರುವ 13 ಸಂಭಾವ್ಯ ಭೀತಿಗಳನ್ನು ನಾವು ಗುರುತಿಸಿದ್ದೇವೆ (ಚಿತ್ರ 1).
ನಾವು ನಕ್ಷೆ ಮಾಡಲು ಬಯಸುವ ಮಣ್ಣಿನ ಜೀವಿಗಳಿಗಿರುವ ಭೀತಿಗಳ ಪಟ್ಟಿಯನ್ನು ನಾವು ಪಡೆದ ನಂತರ, ನಮ್ಮ ಎರಡನೇ ಅಡೆತಡೆ ಸ್ಪಷ್ಟವಾಗುತ್ತದೆ: ಮಣ್ಣಿನ ಜೀವವೈವಿಧ್ಯತೆ ಅಪಾರವಾಗಿದೆ. ಉದಾಹರಣೆಗೆ, ಹೆಚ್ಚುತ್ತಿರುವ ಶುಷ್ಕತೆಯು ಎಲ್ಲಾ ಮಣ್ಣಿನ ಜೀವಿಗಳ ಮೇಲೆ ಒಂದೇ ರೀತಿಯ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ನಮಗೆ ಖಚಿತವಾಗಿದೆಯೇ? ಹೆಚ್ಚಿದ ಶುಷ್ಕತೆಯು ಎರೆಹುಳುಗಳಿಗೆ (ಒದ್ದೆಯಾದ, ತೇವಾಂಶದ ಮಣ್ಣನ್ನು ಇಷ್ಟಪಡುವ) ದೊಡ್ಡ ಸಮಸ್ಯೆಯಾಗಬಹುದು, ಆದರೆ ಕಠಿಣ ಪರಿಸ್ಥಿತಿಗಳನ್ನು ಉತ್ತಮವಾಗಿ ಸಹಿಸಿಕೊಳ್ಳಬಲ್ಲ ಸೂಕ್ಷ್ಮಜೀವಿಗಳಿಗೆ ಕಡಿಮೆ ಸಮಸ್ಯೆಯಾಗಬಹುದು. ಇದಲ್ಲದೆ, ಎಲ್ಲಾ ಎರೆಹುಳು ಅಥವಾ ಬ್ಯಾಕ್ಟೀರಿಯಾ ಪ್ರಭೇದಗಳು ಒಂದೇ ಅಪಾಯದಿಂದ ಒಂದೇ ರೀತಿಯಲ್ಲಿ ಪರಿಣಾಮವನ್ನು ಎದುರಿಸುವುದಿಲ್ಲ. ಆದರ್ಶ ಪರಿಸ್ಥಿತಿಯಲ್ಲಿ, ನಾವು ಪ್ರತಿ ಜಾತಿಯ ಮಣ್ಣಿನ ಜೀವಿಗಳಿಗೆ ಅಪಾಯದ ನಕ್ಷೆಯನ್ನು ರಚಿಸಲು ಪ್ರಯತ್ನಿಸುತ್ತೇವೆ, ಆದರೆ ಅದು ಲಕ್ಷಾಂತರ ನಕ್ಷೆಗಳಿಗೆ ಕಾರಣವಾಗುತ್ತದೆ, ಇದನ್ನು ಸೂಪರ್ ಹೀರೋಗಳಿಗೂ ಸಹ ನಿರ್ವಹಿಸಲು ಅಸಾಧ್ಯ. ಹಾಗಾಗಿ ನಾವು ಈ ವಿಷಯದಲ್ಲಿ ಸ್ವಲ್ಪ ರಾಜೀ ಮಾಡಿಕೊಳ್ಳಬೇಕಾಯಿತು. ಮೊದಲ ಹೆಜ್ಜೆಯಾಗಿ, ನಾವು ಎರಡು ಮುಖ್ಯ ಗುಂಪುಗಳಿಗೆ ನಕ್ಷೆಗಳನ್ನು ರಚಿಸಲು ನಿರ್ಧರಿಸಿದ್ದೇವೆ: ಮಣ್ಣಿನ ಸೂಕ್ಷ್ಮಜೀವಿಗಳು (ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸೇರಿದಂತೆ) ಮತ್ತು ಮಣ್ಣಿನ ಪ್ರಾಣಿಗಳು (ಎರೆಹುಳುಗಳು, ಕೀಟಗಳು, ಸ್ಪ್ರಿಂಗ್ಟೇಲ್ಗಳು ಮತ್ತು ಹುಳಗಳು ಸೇರಿದಂತೆ). ಈಗ ನಾವು ನಕ್ಷೆಗೆ ಅಪಾಯಗಳ ಪಟ್ಟಿಯನ್ನು ಮತ್ತು ಪರಿಗಣಿಸಬೇಕಾದ ಟಾರ್ಗೆಟ್ ಗುಂಪುಗಳ ಪಟ್ಟಿಯನ್ನು ಹೊಂದಿದ್ದೇವೆ. ಇದಾದನಂತರ ಮೂರನೆಯ ಅಡೆತಡೆ ಉದ್ಭವಿಸುತ್ತದೆ. ಪ್ರತಿಯೊಂದು ಅಪಾಯವು ಜೀವಿಗಳ ವಿವಿಧ ಗುಂಪುಗಳ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ? ಶುಷ್ಕತೆಯು ಎರೆಹುಳುಗಳು ಸಾಯಲು ಕಾರಣವಾಗಬಹುದು, ಆದ್ದರಿಂದ ಇದು ಅವುಗಳಿಗೆ ಹೆಚ್ಚಿನ ಮಟ್ಟದ ಅಪಾಯವನ್ನು ಹೊಂದಿದೆ. ಆದಾಗ್ಯೂ, ಕೆಲವು ಬ್ಯಾಕ್ಟೀರಿಯಾವು ಶುಷ್ಕ ಅವಧಿಯಿಂದ ತ್ವರಿತವಾಗಿ ಚೇತರಿಸಿಕೊಳ್ಳಬಹುದು, ಆದ್ದರಿಂದ ಶುಷ್ಕತೆಯು ಅವುಗಳಿಗೆ ಕಡಿಮೆ ಮಟ್ಟದ ಅಪಾಯವನ್ನುಂಟು ಮಾಡುತ್ತದೆ. ಈ ವ್ಯತ್ಯಾಸಗಳನ್ನು ನಿರ್ಣಯಿಸಲು, ಮಣ್ಣಿನ ಜೀವಿಗಳಿಗೆ ಅಪಾಯಗಳ ಬಗ್ಗೆ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಮಣ್ಣಿನ ವಿಜ್ಞಾನಿಗಳ ಜ್ಞಾನವನ್ನು ನಾವು ಆದರಿಸಬೇಕಾಗುತ್ತದೆ. ವಿವಿಧ ಪ್ರಭೇದಗಳಿಗೆ ಇರುವ ಭೀತಿಗಳು ಒಡ್ಡುವ ಅಪಾಯದ ಮಟ್ಟಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುವ ಮೂಲಕ ಈ ತಜ್ಞರು ನಮಗೆ ಸಹಾಯ ಮಾಡಬಹುದು ಎಂದು ನಮಗೆ ತಿಳಿದಿತ್ತು. ನಾವು 100 ಕ್ಕೂ ಹೆಚ್ಚು ಸಂಶೋಧಕರನ್ನು ಸಂಪರ್ಕಿಸಿದೆವು ಮತ್ತು ಅವರು ಅಧ್ಯಯನ ಮಾಡಿದ ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ ಅಪಾಯದ ಮಟ್ಟವನ್ನು (ಕಡಿಮೆ, ಮಧ್ಯಮ, ಹೆಚ್ಚಿನ) ಆಧರಿಸಿ ಮಣ್ಣಿನ ಜೀವವೈವಿಧ್ಯತೆಗೆ ನಮ್ಮ 13 ಭೀತಿಗಳನ್ನು ಶ್ರೇಣೀಕರಿಸಲು ಕೇಳಿದೆವು. ಈ ಮಾಹಿತಿಯು ಪ್ರಸ್ತಾವಿತ ಭೀತಿಗಳು ಮತ್ತು ಜೀವಿಗಳ ಗುಂಪುಗಳಿಗೆ ಸಂಬಂಧಿಸಿದ ಅತ್ಯಂತ ನಿಖರವಾದ ಅಪಾಯದ ಮಟ್ಟವನ್ನು ಗುರುತಿಸಲು ನಮಗೆ ಸಹಾಯ ಮಾಡಿತು.
ಯುರೋಪ್ ಒಕ್ಕೂಟದಲ್ಲಿ ಮಣ್ಣಿನ ಜೀವವೈವಿಧ್ಯತೆಗಿರುವ ಅಪಾಯಗಳು
ಈಗ ನೀವು ಸೂಪರ್ ಹೀರೋಗಳ ತಂಡದ ಭಾಗವಾಗಿದ್ದೀರಿ; ನಿಮ್ಮ ಧ್ಯೇಯವನ್ನು ಸಾಧಿಸಲು ನಿಮಗೆ ಬೇಕಾದ ಎಲ್ಲವನ್ನೂ ನೀವು ಹೊಂದಿದ್ದೀರಿ. ನಿಮ್ಮ ಅತ್ಯಂತ ಅಪಾಯಕಾರಿ ಶತ್ರುಗಳನ್ನು ಗುರುತಿಸಲು ನೀವು ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಿದ್ದೀರಿ, ಮಣ್ಣಿನ ಜೀವಿಗಳ ಗುಂಪುಗಳ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಸಂಯೋಜಿಸಿದ್ದೀರಿ ಮತ್ತು ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ ಅಪಾಯಗಳನ್ನು ಶ್ರೇಯಾಂಕ ನೀಡಿದ್ದೀರಿ (ಚಿತ್ರ 1). ನಾವು ಈ ಕೆಲಸಗಳನ್ನು ಮಾಡಿದಾಗ, ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ, ಮಣ್ಣಿನ ಅತಿಯಾದ ಮಾನವ ಬಳಕೆಯು ಅತ್ಯಂತ ಅಪಾಯಕಾರಿ ಭೀತಿಯಾಗಿದೆ ಎಂದು ನಮ್ಮ ಸಂಶೋಧನೆಗಳು ಸೂಚಿಸಿವೆ, ಅಂದರೆ ಮುಖ್ಯವಾಗಿ ತೀವ್ರವಾದ ಭೌತಿಕ (ಹೆಚ್ಚಿನ ಜಾನುವಾರು ಸಾಂದ್ರತೆ, ಭಾರಿ ಯಂತ್ರೋಪಕರಣಗಳು) ಮತ್ತು ರಾಸಾಯನಿಕ (ಕೀಟನಾಶಕಗಳು ಮತ್ತು ರಸಗೊಬ್ಬರಗಳು) ಒಳಹರಿವುಗಳ ಮೂಲಕ ಕೃಷಿ. ಇದು ಆಶ್ಚರ್ಯಕರವಾದ ವಿಷಯವಲ್ಲ, ಏಕೆಂದರೆ ವಿಚಿತ್ರ ಯಂತ್ರಗಳು ನಿಯಮಿತವಾಗಿ ತನ್ನ ಮನೆಯನ್ನು ಒಡೆಯಲು ಅಥವಾ ನಾಶಪಡಿಸಲು ಬಂದಾಗ ಯಾವುದೇ ಮಣ್ಣಿನ ಜೀವಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಮಾಪಕದ ವಿರುದ್ಧ ತುದಿಯಲ್ಲಿ, ಕೃಷಿಯಲ್ಲಿ GMOಗಳ ಬಳಕೆಯನ್ನು ಕಡಿಮೆ ಅಪಾಯಕಾರಿ ಎಂದು ಶ್ರೇಯಾಂಕ ನೀಡಲಾಯಿತು. GMOಗಳು ಕೃಷಿ ಸಸ್ಯಗಳಾಗಿವೆ, ಅವುಗಳ ಡಿಎನ್ಎಯನ್ನು ಮಾನವರು ಉತ್ತಮವಾಗಿ ಬೆಳೆಯಲು ಮತ್ತು ಹೆಚ್ಚಿನ ಆಹಾರವನ್ನು ಉತ್ಪಾದಿಸಲು ಮಾರ್ಪಡಿಸಿದ್ದಾರೆ. ಕೃಷಿಯಲ್ಲಿ GMO ಸಸ್ಯಗಳ ಬಳಕೆಯು ವಿವಾದಾತ್ಮಕವಾಗಿದೆ. GMOಗಳ ಬಳಕೆಯು ಸಂಪೂರ್ಣವಾಗಿ ಅಪಾಯ-ಮುಕ್ತವಾಗಿಲ್ಲದಿದ್ದರೂ, ಇತರ ಭೀತಿಗಳು ಮಣ್ಣಿನ ಜೀವವೈವಿಧ್ಯತೆಗೆ ಹೆಚ್ಚು ಅಪಾಯಕಾರಿ ಎಂದು ನಮ್ಮ ಸಂಶೋಧನೆಗಳು ಸೂಚಿಸಿವೆ.
ವಿಜ್ಞಾನಿಗಳು ಬಹಳಷ್ಟು ವಿಷಯಗಳಿಗೆ ಒಮ್ಮತದ ನಿಲುವುಗಳನ್ನು ಹೊಂದಿರುವುದಿಲ್ಲ, ಹಾಗೆಯೇ ಈ ಸಂದರ್ಭದಲ್ಲಿಯೂ ಕೆಲವೊಮ್ಮೆ ಭಿನ್ನಾಭಿಪ್ರಾಯದ ಮಟ್ಟವು ತುಂಬಾ ಹೆಚ್ಚಾಗಿತ್ತು, ಕೆಲವು ಭೀತಿಗಳಿಗೆ ಅಪಾಯದ ಮಟ್ಟವನ್ನು ವರ್ಗೀಕರಿಸುವುದು ಅಸಾಧ್ಯವಾಗಿತ್ತು (ಚಿತ್ರ 1). ಉದಾಹರಣೆಗೆ, ಮಣ್ಣಿನ ಪ್ರಾಣಿಗಳ ಮೇಲೆ ಮಾಲಿನ್ಯದ ಪರಿಣಾಮ ಮತ್ತು ಮಣ್ಣಿನ ಸೂಕ್ಷ್ಮಜೀವಿಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ಜೀವವೈವಿಧ್ಯ ತಜ್ಞರು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈತರಹದ “ವಿವಾದಾತ್ಮಕ ಭೀತಿಗಳನ್ನು" ನಿರೀಕ್ಷಿಸಲಾಗಿತ್ತು, ಹಾಗಾಗಿ ನಮ್ಮ ವಿಶ್ಲೇಷಣೆಯ ಒಂದು ಆಸಕ್ತಿದಾಯಕ ಅಡ್ಡಪರಿಣಾಮವೆಂದರೆ ಆ ಭೀತಿಗಳನ್ನು ಗುರುತಿಸುವುದು. ಆದರೂ ಅವುಗಳ ಬಗ್ಗೆ ಅವು ಎಷ್ಟು ಅಪಾಯಕಾರಿ ಎಂದು ಹೇಳಲು ನಮಗೆ ಇನ್ನೂ ಸಾಕಷ್ಟು ತಿಳಿದಿಲ್ಲ. ಈ ಭೀತಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ತನಿಖೆಯ ಅಗತ್ಯವಿದೆ, ಆದ್ದರಿಂದ ಮಣ್ಣಿನ ವಿಜ್ಞಾನಿಗಳನ್ನು ಕಾರ್ಯನಿರತವಾಗಿಡಲು ಸಾಕಷ್ಟು ಕೆಲಸಗಳಿವೆ!
ಶತ್ರುಗಳನ್ನು ಹುಡುಕುವುದು
ನಿಮ್ಮ ಮಿಷನ್ ನ ಮುಂದಿನ ಹಂತ: ಕೆಲವು ಭೌಗೋಳಿಕ ಮಾಹಿತಿಯೊಂದಿಗೆ ಭೀತಿ ಶ್ರೇಯಾಂಕಗಳನ್ನು ಸಂಯೋಜಿಸುವ ಮೂಲಕ ಶತ್ರುಗಳು ಎಲ್ಲಿದ್ದಾರೆಂದು ಕಂಡುಹಿಡಿಯಿರಿ. ಉದಾಹರಣೆಗೆ, “ಕೃಷಿಯಲ್ಲಿ GMOಗಳ ಬಳಕೆ" ಭೀತಿಗಾಗಿ, ನಾವು GMO ಕೃಷಿಯನ್ನು ಅನುಮತಿಸುವ ಯುರೋಪಿಯನ್ ದೇಶಗಳ ನಕ್ಷೆಯನ್ನು (ಸ್ಪೇನ್, ಪೋರ್ಚುಗಲ್, ರೊಮೇನಿಯಾ, ಜೆಕಿಯಾ ಮತ್ತು ಸ್ಲೋವಾಕಿಯಾ) ಆ ದೇಶಗಳ ಕೃಷಿ ಪ್ರದೇಶಗಳ ನಕ್ಷೆಯೊಂದಿಗೆ ಸಂಯೋಜಿಸಿದ್ದೇವೆ. ಇದು ಜೀವಿಗಳಿಗೆ ನ್ನು ಬೆಳೆಯಬಹುದಾದ ಮಣ್ಣನ್ನು ಗುರುತಿಸಲು ನಮಗೆ ಅವಕಾಶ ಮಾಡಿಕೊಟ್ಟಿತು. “ತೀವ್ರವಾದ ಮಾನವ ಬಳಕೆ"ಯ ಭೀತಿಗಾಗಿ, ನಾವು ರಸಗೊಬ್ಬರಗಳ ಬಳಕೆಯನ್ನು (ಹೆಚ್ಚು ರಸಗೊಬ್ಬರಗಳನ್ನು ಬಳಸಿದಷ್ಟೂ, ಮಾನವ ಬಳಕೆ ಹೆಚ್ಚು ತೀವ್ರವಾಗಿರುತ್ತದೆ) ಮತ್ತು ಜಾನುವಾರುಗಳ ಸಂಖ್ಯೆಯನ್ನು (ಹೆಚ್ಚು ಜಾನುವಾರುಗಳು, ಮಣ್ಣಿನ ಮೇಲೆ ಹೆಚ್ಚಿನ ಪರಿಣಾಮ) ತೋರಿಸುವ ನಕ್ಷೆಯನ್ನು ತಯಾರಿಸಿದ್ದೇವೆ. ನಮ್ಮ ಎಲ್ಲಾ ಭೌಗೋಳಿಕ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಸೂಪರ್ ಕಂಪ್ಯೂಟರ್ ಗಳಿಗೆ ಧನ್ಯವಾದಗಳು, ಯುರೋಪಿಯನ್ ಒಕ್ಕೂಟದಲ್ಲಿ ಮಣ್ಣಿನ ಜೀವವೈವಿಧ್ಯತೆಗೆ ಅಪಾಯವನ್ನು ತೋರಿಸುವ ನಕ್ಷೆಗಳನ್ನು ತಯಾರಿಸಲು ನಾವು ಎಲ್ಲಾ ಮಾಹಿತಿಯನ್ನು ಒಟ್ಟಿಗೆ ತಂದಿದ್ದೇವೆ (ಚಿತ್ರ 2). 27 ಯುರೋಪಿಯನ್ ದೇಶಗಳಲ್ಲಿನ ಅಪಾಯದ ವಿತರಣೆಯನ್ನು ನಾವು ಸೂಕ್ಷ್ಮವಾಗಿ ನೋಡಿದಾಗ, ನಾವು ಆತಂಕಕಾರಿ ಪರಿಸ್ಥಿತಿಯನ್ನು ಕಂಡುಕೊಂಡಿದ್ದೇವೆ. ಅಧ್ಯಯನ ಮಾಡಿದ ಅರ್ಧಕ್ಕಿಂತ ಹೆಚ್ಚು ದೇಶಗಳಲ್ಲಿ (27 ರಲ್ಲಿ 14), 40% ಮಣ್ಣು, ಮಣ್ಣಿನ ಸೂಕ್ಷ್ಮಜೀವಿಗಳು ಮತ್ತು ಪ್ರಾಣಿಗಳಿಗೆ GMOಗಳು ಹೆಚ್ಚಿನ ಮಟ್ಟದ ಅಪಾಯವನ್ನುಂಟುಮಾಡುತ್ತವೆ. ಕೇವಲ ಐದು ದೇಶಗಳಲ್ಲಿ ತಮ್ಮ ಮಣ್ಣಿನ 40% ಕ್ಕಿಂತ ಹೆಚ್ಚು ಮಣ್ಣಿನ ಜೀವಿಗಳಿಗೆ ಕಡಿಮೆ ಅಪಾಯವನ್ನುಂಟುಮಾಡುತ್ತವೆ ಎಂದು ತೋರಿಸಿದೆ. ನಾವು ತಯಾರಿಸಿದ ನಕ್ಷೆಗಳು ಪ್ರತಿ ದೇಶದಲ್ಲಿ ಹೆಚ್ಚಿನ ಮಟ್ಟದ ಅಪಾಯವನ್ನು ಹೊಂದಿರುವ ಪ್ರದೇಶಗಳನ್ನು ಗುರುತಿಸಲು ನಮಗೆ ಅವಕಾಶ ಮಾಡಿಕೊಟ್ಟವು, ಆದರೆ ಆ ಪ್ರದೇಶಗಳಲ್ಲಿನ ಮಣ್ಣಿನ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳ ಬಗ್ಗೆಯೂ ಅವು ನಮಗೆ ಮಾಹಿತಿಯನ್ನು ನೀಡಿದವು. ಮಣ್ಣಿನ ಜೀವವೈವಿಧ್ಯತೆಯ ಸರಿಯಾದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಈ ಎಲ್ಲಾ ದತ್ತಾಂಶಗಳು ಮೂಲಭೂತವಾಗಿವೆ.
ಶಬ್ದಕೋಶ?
ನಾವು ಮಣ್ಣಿನ ಜೀವವೈವಿಧ್ಯತೆಗೆ ಅಪಾಯಗಳನ್ನು ಮ್ಯಾಪ್ ಮಾಡಿದ್ದೇವೆ ಮತ್ತು ಮಣ್ಣಿನ ಜೀವಿಗಳನ್ನು ಸಂರಕ್ಷಿಸಲು ಸಹಾಯ ಅಗತ್ಯವಿರುವ ಪ್ರದೇಶಗಳನ್ನು ಕಂಡುಹಿಡಿದಿದ್ದೇವೆ. ಇದರರ್ಥ ನಾವು ಹೇಳಬಹುದು, "ಮಿಷನ್ ಪೂರ್ಣಗೊಂಡಿದೆ! ನೆಲದ ಕೆಳಗಿನ ಜೀವನವು ಸುರಕ್ಷಿತವಾಗಿದೆ!"? ನಿಜವಾಗಿಯೂ ಅಲ್ಲ. ಆದರೆ ಇಲ್ಲಿ ಉತ್ತಮ ಭಾಗವಿದೆ: ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಮಣ್ಣಿನ ಜೀವಿಗಳಿಗೆ ಅಪಾಯಗಳನ್ನು ಕಡಿಮೆ ಮಾಡುವ ನಿಜ ಜೀವನದ ಕ್ರಿಯೆಗಳನ್ನು ನಾವು ಈಗ ಗುರುತಿಸಬೇಕು. ಉದಾಹರಣೆಗೆ, ಮಾನವ ಹಸ್ತಕ್ಷೇಪವನ್ನು ತಪ್ಪಿಸಲು ಅಥವಾ ಕನಿಷ್ಠ ಕಡಿಮೆ ಮಾಡಲು ಸಂರಕ್ಷಿತ ಪ್ರದೇಶಗಳನ್ನು (ರಾಷ್ಟ್ರೀಯ ಉದ್ಯಾನವನಗಳಂತಹ) ಸ್ಥಾಪಿಸಬಹುದು. ಆದಾಗ್ಯೂ, ಅನೇಕ ಸಂದರ್ಭಗಳಲ್ಲಿ ಇದು ಸಾಕಾಗುವುದಿಲ್ಲ. ಉದಾಹರಣೆಗೆ, ವಿಪರೀತ ಹವಾಮಾನ ಘಟನೆಗಳು ಗಡಿಗಳನ್ನು ಹೊಂದಿರುವುದಿಲ್ಲ; ಅವು ರಾಷ್ಟ್ರೀಯ ಉದ್ಯಾನವನಗಳಲ್ಲಿಯೂ ಕಂಡುಬರುತ್ತವೆ. ಮಣ್ಣಿನ ಜೀವಿಗಳ ಮೇಲೆ ತೀವ್ರ ಹವಾಮಾನದ ಪರಿಣಾಮಗಳನ್ನು ಕಡಿಮೆ ಮಾಡಲು, ಹವಾಮಾನ ಬದಲಾವಣೆಯನ್ನು ನಿಧಾನಗೊಳಿಸಲು ಅಥವಾ ಹಿಮ್ಮೆಟ್ಟಿಸಲು ಸಹಾಯ ಮಾಡುವ ವ್ಯಾಪಕ ಕ್ರಮಗಳು ನಮಗೆ ಬೇಕಾಗುತ್ತವೆ. ಅದು ಮತ್ತೊಂದು ಕಥೆ- ನಿಜವಾದ ಸೂಪರ್ ಹೀರೋ ಮಿಷನ್!
ಶಬ್ದಕೋಶ
ಆನುವಂಶಿಕವಾಗಿ ಮಾರ್ಪಡಿಸಿದ ಜೀವಿ (GMO)
ಕೀಟ ನಿರೋಧಕತೆ ಅಥವಾ ಕಳೆ ಕೊಲ್ಲುವ ರಾಸಾಯನಿಕಗಳ ಉಪಸ್ಥಿತಿಯಲ್ಲಿ ಬೆಳೆಯುವ ಸಾಮರ್ಥ್ಯದಂತಹ ಹೊಸ ಸಾಮರ್ಥ್ಯಗಳನ್ನು ನೀಡಲು ತನ್ನ ಡಿಎನ್ಎಯನ್ನು ಮಾರ್ಪಡಿಸಿದ ಜೀವಿ.
ಅರಿಡಿಟಿ (ಬರಗಾಲ)
ಈ ಸ್ಥಿತಿಯು ಪರಿಸರದಲ್ಲಿ ಸೀಮಿತ-ನೀರಿನ ಲಭ್ಯತೆಯಿಂದ ನಿರೂಪಿಸಲ್ಪಟ್ಟಿದೆ, ಮುಖ್ಯವಾಗಿ ಮಳೆಯ ಕೊರತೆಯಿಂದಾಗಿ.
ಮಣ್ಣಿನ ಸೂಕ್ಷ್ಮಜೀವಿಗಳು
ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು. ಮಣ್ಣಿನ ಸೂಕ್ಷ್ಮಜೀವಿಗಳಲ್ಲಿ ಆರ್ಕಿಯಾ, ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಪ್ರೋಟಿಸ್ಟ್ ಗಳು ಸೇರಿವೆ
ಮಣ್ಣಿನ ಪ್ರಾಣಿಗಳು
ಅನಿಮಲಿಯಾ ಸಾಮ್ರಾಜ್ಯಕ್ಕೆ ಸೇರಿದ ಮಣ್ಣಿನಲ್ಲಿ ವಾಸಿಸುವ ಜೀವಿಗಳು. ಇವು ನೆಮಟೋಡ್ ಗಳು (<0.1 ಮಿಮೀ) ಎಂದು ಕರೆಯಲ್ಪಡುವ ಸಣ್ಣ ಹುಳುಗಳಿಂದ ಹಿಡಿದು ಮೋಲ್ ನಂತಹ ದೊಡ್ಡ ಪ್ರಾಣಿಗಳವರೆಗೆ ಇರುತ್ತವೆ.
ಮೂಲ ಲೇಖನ
Orgiazzi, A., Panagos, P., Yigini, Y., Dunbar, M. B., Gardi, C., Montanarella, L., et al. 2016. Knowledge-Based approach to estimating the magnitude and spatial patterns of potential threats to soil biodiversity. Sci. Total Environ. 545-546:11–20. doi: 10.1016/j.scitotenv.2015.12.092
ಉಲ್ಲೇಖಗಳು
[1] Orgiazzi, A. et al., 2016, Global Soil Biodiversity Atlas (European Commission).
[2] Orgiazzi, A. et al., 2016, Knowledge-based approach to estimating the magnitude and spatial patterns of potential threats to soil biodiversity. Sci. Total Environ., 545–546, pp. 11-20.
[3] Tsiafouli, M. A. et al., 2015, Intensive agriculture reduces soil biodiversity across Europe. Glob. Change Biol. 21, 973–985.
[4] Carpenter J. 2011. Impact of GM crops in biodiversity. GM Crops 2: 7–23.
EDITED BY: Helen Phillips, Saint Mary’s University, Canada
CITATION: Orgiazzi A (2022) Protecting Soil Biodiversity: A Dirty Job, but Somebody’s Gotta Do It! Front. Young Minds 10:677917. doi: 10.3389/frym.2022.677917
CONFLICT OF INTEREST: The author declares that the research was conducted in the absence of any commercial or financial relationships that could be construed as a potential conflict of interest.
COPYRIGHT © 2022 Orgiazzi. This is an open-access article distributed under the terms of the Creative Commons Attribution License (CC BY). The use, distribution or reproduction in other forums is permitted, provided the original author(s) and the copyright owner(s) are credited and that the original publication in this journal is cited, in accordance with accepted academic practice. No use, distribution or reproduction is permitted which does not comply with these terms.
ಕಿರಿಯ ವಿಮರ್ಶಕರು
ಕೇಸ್ವಿಲ್ಲೆ ಜೂನಿಯರ್ ಪ್ರೌಢಶಾಲೆ, ವಯಸ್ಸು: 12–13
The students that reviewed this article were selected from Mr. Lanford’s Science7 classes at Kaysville Jr High. Students that live in the area come from strongcommunities that also know how to appreciate and enjoy nature in the Western US.A lot of the families make a habit to go hiking, fishing, camping,rock hounding, riverrafting, biking, and too many other hobbies to mention.
ಲೇಖಕ
ALBERTO ORGIAZZI
When he was a child, Alberto wanted to become a helicopter pilot. However, life isfull of surprises, and instead he has gone theway of the ostrich, putting his head in theground. Switching fromthe sky to the soil, he is nowa soil researcher at the EuropeanCommission’s Joint Research Center. His current mission focuses on the creation ofdetailed maps of life in European soils. *alberto.orgiazzi@gmail.com
ಅನುವಾದ
ರಮೇಶ್ಹೆಚ್. ಜಯರಾಮಯ್ಯ
ರಮೇಶ ಅವರು ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆಯ ಕುರಿತು ಕೆಲಸ ಮಾಡುವ ಮಣ್ಣಿನ ಪರಿಸರಶಾಸ್ತ್ರಜ್ಞರಾಗಿದ್ದಾರೆ. ಅವರು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದಲ್ಲಿ "ಪ್ರಮುಖ ಮಣ್ಣಿನ ಕಾರ್ಯಗಳ ಮೇಲೆ ಸಸ್ಯ ಮತ್ತು ಸೂಕ್ಷ್ಮಜೀವಿಯ ವೈವಿಧ್ಯತೆಯ ಪರಸ್ಪರ ಕ್ರಿಯೆಗಳ ಪರಿಣಾಮಗಳು" ಕುರಿತು ಪಿಎಚ್‌ಡಿ ಪದವಿ ಪಡೆದರು. ಪ್ರಸ್ತುತ, ಮುರ್ಡೋಕ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧಕರಾಗಿ, ಅವರು ಮಣ್ಣಿನ ಸೂಕ್ಷ್ಮಜೀವಿಗಳ ಜೊತೆಗೆ ಮಣ್ಣಿನ ಪ್ರಾಣಿಗಳನ್ನು ಒಳಗೊಳ್ಳುವ ಮೂಲಕ ತಮ್ಮ ಸಂಶೋಧನಾ ಪ್ರದೇಶವನ್ನು ವಿಸ್ತರಿಸಿದ್ದಾರೆ. ಮಣ್ಣಿನ ಪ್ರಾಣಿಗಳ ಕುರಿತಾದ ಅವರ ಸಂಶೋಧನೆಯು ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ಚಕ್ರದಲ್ಲಿ ಈ ಮಣ್ಣಿನ ಜೀವಿಗಳು ವಹಿಸುವ ಪಾತ್ರಗಳನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಕೇಂದ್ರೀಕರಿಸುತ್ತದೆ. ಅವರ ಕೆಲಸವು ಮಣ್ಣಿನ ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಯ ಸಮುದಾಯಗಳ ನಡುವಿನ ಪರಸ್ಪರ ಕ್ರಿಯೆಗಳನ್ನು ಅಧ್ಯಯನ ಮಾಡುವುದರ ಜೊತೆಗೆ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಅವುಗಳ ಸಾಮೂಹಿಕ ಪ್ರಭಾವವನ್ನು ಒಳಗೊಂಡಿದೆ.
ಹಣಕಾಸು (ಅನುವಾದ)
The team Translating Soil Biodiversity acknowledges support of the German Centre for integrative Biodiversity Research (iDiv) Halle-Jena-Leipzig funded by the German Research Foundation (DFG FZT 118, 202548816).
ಉಲ್ಲೇಖ (ಅನುವಾದ)
This is an open-access article distributed under the terms of the Creative Commons Attribution License (CC-BY 4.0). The use, distribution or reproduction in other forums is permitted, provided the original author(s) and the copyright owner(s) are credited and that the original publication in this journal is cited, in accordance with accepted academic practice. No use, distribution or reproduction is permitted which does not comply with these terms.
Recommended citation format: Orgiazzi A (2025) Protecting Soil Biodiversity: A Dirty Job, but Somebody’s Gotta Do It! (Kannada translation: Ramesha H. Jayaramaiah). Translating Soil Biodiversity & Front. Young Minds. Originally published in 2022, doi: 10.3389/frym.2022.677917